ಸೋಮವಾರ, ಜನವರಿ 30, 2017

ಭ್ರಮಾಲೋಕ

ದಟ್ಟಡವಿಯೊಳು ದುಗುಡದಿ ನಡೆದಂತೆ ಬುದ್ಧಿಜೀವಿಗಳ ಬದುಕಾಗಿಹುದಯ್ಯಾ,
ತಾಕಂಡ ಕಾಣರಿಯದ ಬಲೆಯ ಹೆಣೆಯುತಲಿ ತಾವೇ ಬಲೆಗೆ ಸಿಲುಕುವರಯ್ಯಾ,
ಹಸನಾದ ಬದುಕಿನಲಿ ಹುಸಿ ಕನಸುಗಳ ಕಟ್ಟಿ ಹಳಸಿದ ಜೀವನ ನಡೆಸುವರಯ್ಯಾ,
ಸಂಬಂಧದೆಳೆಯ ಕಳಚಿ ಸಮಯವೆಂಬೆಳೆಯೊಳು ನಾನ್ ತಾಮುಂದೆನ್ನುತ ತೇಲುತಿಹರಯ್ಯಾ,
ತಿಳಿಯದಾ ಲೋಕದೊಳು ಭ್ರಮೆಯಂಬ ಮಾಯೆಯೊಳು ಮಂಪಿರುವ ಚಿತ್ತದಲಿ ಮುಳುಗುತಿಹರಯ್ಯಾ.

ಶುಕ್ರವಾರ, ಡಿಸೆಂಬರ್ 23, 2016

ಏನಿದು ಕವನ!?

ಏನಿದು ಕವನ!? ನನ್ನಲೇಕೋ ಮೌನ.
ಬರೆವ ಕುಳಿತರೂ, ಬರದೀ ಮನಕೆ!?

ಭಾವನೆ ಎಲ್ಲಿಹುದು!? ಮನದಿ ತಡಕಾಡಿದರೂ ಸಿಗದಾಗಿಹುದು.
ಮಳೆಯಿಲ್ಲದ ನೆಲದಲ್ಲಿ, ಜಲಕೆ ಪರಿತಪಿಸುವಂತಾಗಿಹುದು.

ಜೀವನದ ಜಂಜಾಟದಿ, ಮರೆತೆನಾ ನನ್ನನೇ!?
ಸಮಯದಾ ಕುದುರೆಯೇರಿ, ತೊರೆದೆನಾ ಭಾವನೆಯನ್ನೆ!?

ಏನಿದು ಕವನ!? ನನ್ನಲೇಕೋ ಮೌನ.

ಶನಿವಾರ, ಜನವರಿ 30, 2016

ವಿಚಿತ್ರ

ಬೆಳೆಗೆ ಬೇಕು ಮಳೆ
ಸತ್ಯ ಅರಿವಾಗಲು ಸಮಯ ಬೇಕಿತ್ತು
ಮಳೆ ಇಲ್ಲದಿದ್ದರೂ ಬೆಳೆ
ಆದರೆ ಅದು ಪಾಪಸುಕಳ್ಳಿ

ಅವರವರ ಭಾವಕೆ ಅವರವರ ಭಕುತಿಗೆ
ಹೇಳಿದ್ದ ಅವನು ಹಲವು ಬಾರಿ
ಆದರೆ ಈ ಕ್ಷಣ  ಅವನಿಗದು ದುಬಾರಿ

ಬರೆದರೆ ಅರ್ಥವಾಗುವ ಹಾಗೆ ಬರೆಯಬೇಕು
ಯಾರಿಗೆ?
ಪ್ರಶ್ನೆ ನನ್ನಲ್ಲಿದೆ ಮೊದಲಿನಿಂದ

ಹುಟ್ಟಿದ ದಿನ ಹುಡಕದಿರಿ ಪಾಪಸುಕಳ್ಳಿ
ಸಿಕ್ಕರೂ ದುಬಾರಿ ಅದು ಸುಭಿಕ್ಷದ  ನಾಡಲ್ಲಿ
ಏನು ಅರ್ಥವಾಗಲಿಲ್ಲವೇ....! ಕ್ಷಮಿಸಿ ಹಾಗಿದ್ದರೆ ಇದು ನಿಮಗಲ್ಲ.

ಮಂಗಳವಾರ, ಫೆಬ್ರವರಿ 24, 2015

ಬದುಕು

ಕಾಲದ ಹಾದಿಯಲಿ
ಕರ್ಮದ ಹೊರೆಹೊತ್ತು
ಬದುಕುವ ಹೊಣೆಹೊತ್ತು
ಸಾಗಬೇಕಿದೆ  ನಾವು

                               ಕಲ್ಲು ಮುಳ್ಳು ಬರುವುದು
                                ಕಾಲ ಹಾದಿಯಲಿ
                                ಎಂಬ ಸತ್ಯ ಜಗಕೆಲ್ಲ ಗೊತ್ತು
                                ಕಲ್ಲು ಮುಳ್ಳು ತುಳಿದು ಸಾಗುವರೆಷ್ಟೋ ?
                                ಕಲ್ಲು ಮುಳ್ಳು ಸರಿಸಿ  ಸಾಗುವರೆಷ್ಟೋ ?
                                ತುಳಿದು ಸಾಗಿದವರು ಗೆದ್ದರೋ?
                                ಸರಿಸಿ ಸಾಗಿದವರು ಗೆದ್ದರೋ ?
                                ಗೆಲ್ಲುವದಕ್ಕಾಗಿ ಸಾಗಿದರೋ ?
                                ಸಾಗಿದ್ದಕ್ಕಾಗಿ ಗೆದ್ದರೋ ?
                                ಗೆದ್ದೆವೆಂದು ಬೀಗಿದವರೆಷ್ಟೋ ?
                                ಗೆಲುವು ಮಿಥ್ಯವೆಂದವರೆಷ್ಟೋ ?

ಬದುಕುವ ಹೊಣೆಹೊತ್ತು
ಸಾಗಬೇಕಿದೆ ನಾವು
ಗೆದ್ದ ಜನರಿಗೆ ಗುರಿಮುಖ್ಯ
ಸೋತವರಿಗೆ ಪಥ ಮುಖ್ಯ
ಒಟ್ಟಿನಲಿ ಬದುಕುವುದು ಮುಖ್ಯ
ಸೋತೆ ಎನ್ನುವ ಬದಲು
ಗೆಲುವು ಮಿಥ್ಯ ಎಂದರೆ ತಪ್ಪಾದಿತೇ ?
ಒಟ್ಟಿನಲಿ ಸಾಗುವುದು ಮುಖ್ಯ
ಸಾಗಿ ಬದುಕುವುದು ಮುಖ್ಯ

                                   
                                       ಬದುಕುವ ಹೊಣೆಹೊತ್ತು
                                       ಸಾಗಬೇಕಿದೆ  ನಾವು
                                       ಕರ್ಮದ ಹೊರೆಹೊತ್ತು
                                       ಕಾಲದ ಹಾದಿಯಲಿ
                                       ಕಾಲನ ಕಡೆಗೆ

ಶುಕ್ರವಾರ, ಜನವರಿ 30, 2015

ಆಕಸ್ಮಿಕ

ಬದುಕಿನ ಚಿತ್ತ
ಅದು ಆಕಸ್ಮಿಕಗಳ ಮೊತ್ತ

ಇರುವದು ಇದ್ದಾಗ 
ಇದ್ದದ್ದು ಇಲ್ಲವಾದಾಗ
ಇಲ್ಲದ್ದು ಎಲ್ಲವಾದಾಗ
ಎಲ್ಲವಾದದ್ದು ಅಲ್ಲವಾದಾಗ  
ಅದು ಬದುಕಿನ ಚಿತ್ತ

ಬಾರದು ಬಂದಾಗ
ಬಂದು ಇಲ್ಲವಾದಾಗ
ಬರುವುದು ಬಾರದಾದಾಗ
ಬರಲಸಾಧ್ಯವಾದರೂ ಬಂದಾಗ
ಅದು ಆಕಸ್ಮಿಕಗಳ ಮೊತ್ತ

ಆಕಸ್ಮಿಕಗಳ ಮೊತ್ತ
ಅದು ಬದುಕಿನ ಚಿತ್ತ